ಮಂಗಳವಾರ, ಡಿಸೆಂಬರ್ 17, 2013

ಬಾಳ ನೂರು ದಾರಿ!!!

ಹುಟ್ಟು ಸಾವಿನ ನಡುವೆ
ಸುಳ್ಳು ಸತ್ಯದ ಹಾದಿ
ಓಡಿ ನಡೆಯುತ
ನಡೆದು ನಿಲ್ಲುತ
ನಿಂತು ನರಳುತ
ಬದುಕೇ ಮುಗಿಯಿತಾ?


ಭಯದ ನೆರಳಲಿ
ದಾರಿ ಬದಲಿಸಿ
ಮನದ ಮರುಳಲಿ 
ಕನಸ ಕರಗಿಸಿ
ಧನದ ಉರುಳಲಿ 
ಪಯಣ ಸಾಗಿಸಿ
ಬಾಳ ಸವೆಸಬೇಕಿದೆ!


ಜಗದಿ ಗುರಿಗಳು ಬಹಳ
ಮುಟ್ಟುವ ಮನಗಳು ವಿರಳ
ಸೋಲಿನ ಮನೆಯಲಿ
ಗೆಲುವಿನ ನೆರಳು
ಕಾಣದೆ ಕಂಡ ನಲಿವಿಗೆ
ಬದುಕು ಮರುಳು!


ಮುಂದೆ ನೋಡದೆ
ಹಿಂದೆ ಕೇಳದೆ
ಜೊತೆಗೆ ನಡೆದ ಕಾಲು ಜಾರಿದೆ;
ಕೆಳಗೆ ಬೀಳುತ
ಮೇಲೆ ನೋಡುತ
ಎಲ್ಲ ಮರೆಯುತ
ಜೀವನ ಮೆರೆಸಬೇಕಿದೆ!


ಮುಗಿಯಿತೆನ್ನುವ ಮುನ್ನ
ಕೊನೆಯ ದಿಬ್ಬಣವು ಚೆನ್ನ 
ಬೆಳಗಲು ಸತ್ಯದ  ಜ್ವಾಲೆ
ಹುಸಿಯ ಸಮಾಧಿಯ ಮೇಲೆ
ಮರಣಕು ಮಂದಹಾಸದ
ಮೊಗವ ತೊಡಿಸಿ ಬದುಕಬೇಕಿದೆ
ಒಮ್ಮೆ ಬದುಕಬೇಕಿದೆ!!

ಸೋಮವಾರ, ಡಿಸೆಂಬರ್ 9, 2013

ಬಲು ವಿಸ್ಮಯ ಭಾವ!!!

ಅಚ್ಚರಿಯ ಅಂಗಳದಿ,
ಬೆಚ್ಚನೆಯ ಭಾವಗಳಿವು 
ಸಜ್ಜಾಗಿ ಸಾಲು ಸಾಲಾಗಿ 
ಸಾಗುತಿಹವು !!!

ವಿರಹದೊಳು ಒಲವಿನ ಸುಖ!
ಏಕಾಂತದಲಿ ಪ್ರೇಮದ ಹಿತ!
ದೂರಕ್ಕೆ ಹತ್ತಿರದ ಹಬ್ಬ! 
ಅಳುವಿನಲಿ ನಗುವಿನ ಸೊಗ !

ಸುಮ್ಮನೆ ಸಾಗುವ ಬಯಕೆಗಳ ಭಾವ 
ಬಲು ವಿಸ್ಮಯ !!! 

ಗುರುವಾರ, ನವೆಂಬರ್ 28, 2013

ನಮ್ಮ ಪುಟ್ಟ ರಾಣಿ ...


ಬಂದಿಳಿದಳು ನಮ್ಮರಮನೆಗೆ ಪುಟ್ಟ ರಾಣಿ;
ನಲಿವಿನ ನೀಲವೇಣಿ, ಹರುಷ ಚಿಮ್ಮುವ ಹರಿಣಿ
ಮುದ್ಧು ಮೊಗದ ಮಹಾರಾಣಿ
ತೊದಲು ನುಡಿಯ ಕೀರವಾಣಿ;
ನಿನ್ನಾಗಮನವೆ ನಮ್ಮ ಸಂತಸದ ಬೋಣಿ
ತುಂಟ ನಗೆಯ ಅರಗಿಣಿ
ಜೀವನೋತ್ಸಾಹದ ಗಣಿ!!

ಮಂಗಳವಾರ, ನವೆಂಬರ್ 26, 2013

ಮೌನ ವೀಣೆ !


ಆಲಿಸುವ ಮುನ್ನ ನಿನ್ನ ಗಾನವ,
ಮರೆಯಾಗಲೇ ನಾ ನಿನ್ನ ಮೌನದೊಳಗೆ;

ನೋಡುವ ಮುನ್ನ ನಿನ್ನ ಸ್ವರನರ್ತನವ,
ನೆಲೆಸಲೇ ನಾ ನಿನ್ನ ಸೌರಭದೊಳಗ;

ಸೇರುವ ಮುನ್ನ ನಿನ್ನ ಆತ್ಮಗೀತೆಯ,
ಸೆರೆಯಾಗಲೇ ನಾ ನಿನ್ನ ಮಾಧುರ್ಯದೊಳಗೆ;

ನಿನ್ನುಸಿರ ಸಂಗೀತದ ಅಮೃತಯಾನ,
ನನ್ನೆದೆಯ ಹರುಷಕೆ ಮೋಹನ ಗಾನ;


ಗುರುವಾರ, ನವೆಂಬರ್ 14, 2013

ಕನ್ನಡ ಕನ್ನಡ !

ಹಬ್ಬವೆನ್ನಲು ಕನ್ನಡ,
ಹರುಷವೆನ್ನಲು ಕನ್ನಡ,
ನಮ್ಮ ಪ್ರತಿಭಾವದ ಪ್ರತಿಬಿಂಬ ಕನ್ನಡ;
ಜಾಜಿಮಲ್ಲಿಗೆಯ ಕಂಪು ಕನ್ನಡ, 
ಕಾಜಾಣದ ಇಂಪು ಕನ್ನಡ, 
ಕಲ್ಪವೃಕ್ಷದ ತಂಪು ಕನ್ನಡ! 
ಜಗದ ಹೂಗಳೆಲ್ಲ ಸೇರಿ, 
ಅಕ್ಷರಗಳ ಮಾಲೆಯಾಗಿ,
ಬೆಳಕ ದಾರಿದೀಪವಾಗಿ, 
ಕನ್ನಡಿಗರ ಜಿಹ್ವೆ ಮೇಲೆ 
ಒಲಿದು ನಲಿದು ಮಿನುಗಿ ಹೊಳೆವ 
ನಮ್ಮ ಭಾಷೆ ಕನ್ನಡ ! 

ವಿರಹ ವಿಕೃತ!

ನೋವಲಿ ಸಾವು ಬಲು ಸುಂದರ 
ಜೀವನ ಮರೆತ ಸಂಗಾತಿಯಷ್ಟೇ ಭೀಕರ;
ಬದುಕು ಆನಂದ-ಅನುಭವ-ಆಘಾತ-ಅಚ್ಚರಿಗಳ 
ಅನಂತ ಸಾಗರ;
ನಿನ್ನ ಹರುಷ ದ್ವೀಪದೆಡೆಗೆ ನನ್ನ ಸಂಚಾರ !!  

ಶುಕ್ರವಾರ, ಅಕ್ಟೋಬರ್ 18, 2013

ನೀ ಬರಿಯ ಕನಸು...

ನಿನ್ನ ಗೆಲ್ಲುವ ಸಾಮರ್ಥ್ಯ ನನಗಿಲ್ಲ,
ಸೋಲಿಗೆ ನಾ ಹೊಸಬನಲ್ಲ,
ನಿನ್ನ ವಿರಹಕೆ ಪರಿಚಿತನಾಗುವ ಭೀತಿ 
ಮೀರಿ ಬದುಕುವ ಬಲ ನನಗಿಲ್ಲ... 




ಬಂದು ಹೋಗುವ ನಡುವೆ...

ಸುಮ್ಮನೇ ಸಾಗುತಿರಲು ಸಮಯ,
ಕಮರಿದೆ ಬರಿ ಕನಸಿನಲೇ ಈ ಹರೆಯ.. 

ಕಳೆದ ಕ್ಷಣಗಳು ಬಂದು 
ಇರುವ ಕ್ಷಣಗಳ ಕೊಂದು 
ತಂದ ನೆನಪುಗಳೋ ಬಲು ಧೂರ್ತ;
ಅನರ್ಥ ಮಾತಿನೊಳು ಬಾಳು 
ವ್ಯರ್ಥ ವ್ಯರ್ಥ !

ಬಾಳ ಬೆಳಗಬೇಕಿದೆ ಸಾಧನೆಯ ದೀಪ್ತಿ 
ಬರುವ ನಾಳೆಗಳಿಗೆ ಸಿಗಬೇಕಿದೆ 
ಸಾರ್ಥಕತೆಯ ಸಂತೃಪ್ತಿ... 




ಮೂರು ಸಂವತ್ಸರ...


ಕೂಡಿ ಕಳೆದ ಹರುಷಕೆ ಇಂದು ಮೂರು ವರುಷ,
ಮನದಿ ಸವಿನೆನಪಿನ ಮುಗುಳ್ನಗೆಯೇ ಪ್ರತಿ ನಿಮಿಷ,
ಕಾರಣ ಕೇಳದೆ ಓಡುವ ಕಾಲವು 
ತಂದ ಉಡುಗೊರೆಗಳು ನೂರಾರು,
ಅರಿವಿಗೆ ಸಿಗದೆ ಗತಿಸಿದ ಸಂಬಂಧಗಳು
ಸಾವಿರಾರು.... 



ನೀ ಅವ್ಯಕ್ತ ಕಡಲು !!

ನಿನ್ನ ಸಾವಿರ ಸವಿ ನೆನಪುಗಳ 
ಮೋಹಕ ಮುಗ್ಧ ರೂಪಗಳ 
ಎನ್ನ ಕಾವ್ಯ ಕಾನನದ 
ಪದ ಪುಷ್ಪ ಗಂಧದ ಸುಳಿಯೊಳು,
ಬಂಧಿಸದಾದೆನು..!

ನಿನ್ನ ಮನದ ವಿಸ್ಮಯವ 
ಸುಡುವ ಮೌನ ಹಂಬಲವ 
ಕವಿತೆ ಸಾಲ ಸಾಮ್ರಾಜ್ಯದೊಳು 
ಅಕ್ಷರದರಮನೆಯ ಕಟ್ಟಿ 
ಕವನ ಕನಕವೃಷ್ಟಿಗೈದು 
ಸಿಂಗರಿಸದಾದೆನು ...!





ಸೋಮವಾರ, ಜುಲೈ 29, 2013

ಮರೆತು ಮರೆಯಲಾಗದ ರೂಪ...

ಎಂದೋ ಕಂಡ ನಿನ್ನ ರೂಪ,
ಮನದಿ ಇಂದು ಮೂಡಿದೆ,
ನನ್ನ ಬಿಡದೆ ಕಾಡಿದೆ;

ದಿನ ದಿನವು ಅದರ ಸೊಬಗು,
ಕಲ್ಪನೆಯ ಕಣ್ಣಲ್ಲಿ ಕಂಗೊಳಿಸುತಿದೆ;

ಅಂದೇ ಪ್ರಾರಂಭ ನಿನ್ನ ಪ್ರೇಮ ಪರೀಕ್ಷೆಗೆ ನನ್ನ ತಯಾರಿ,
ನಿನ್ನ ಕಣ್ಣ ಕಂಡ ಕ್ಷಣ ನಾನರಿಯೆ ಅದ ಮುಂದೂಡುವ ಪರಿ;

ನೀ ಇರದಿರಲು, ನಿನ್ನ ಸವಿ ನೆನಪಿನೊಂದಿಗೆ ನನ್ನ ತುಂಟತನ,
ನೀ ಎದುರಿಗೆ ಬರಲು ಮಾತಿಗೂ ನಾಲಿಗೆಗೂ ಮೌನ ವಿಚ್ಚೇದನ;

ತರುಣಿ ತಡ ಮಾಡದೆ ನೀಡು ನಿನ್ನ ಹೃದಯದಿ ಜಾಗ,
ಆಗಲೇ ನನ್ನ ಮೌನ ರಾಗಕೆ ಪದಗಳ ಸ್ಪರ್ಶದ ಯೋಗ;

ಮೊದಲ ಮಿಲನ,ಹೃದಯ ಸ್ಪಂದನ..

ನಿನ್ನ ಮೊದಲ ಭೇಟಿ,  
ಕವಿಯನ್ನಾಗಿಸಿತು ನನ್ನ;

ನಿನ್ನ ಕಣ್ಣ ಸವಿಮಾತು,

ಮೂಕನನ್ನಾಗಿಸಿತು ನನ್ನ;
 

ನಿನ್ನ ನಗೆಯ ಸಂಚು,
ಬಂದಿಯಾಗಿಸಿತು ನನ್ನ;
 

ನಿನ್ನ ಹಾಲ್ಗೆನ್ನೆಯ ಹೊಳಪು,
ಮರುಳಾಗಿಸಿತು ಮನವ;

ನಿನ್ನ ಉಸಿರಿನ ಸಂಗೀತದಲಿ,
ಕಾವ್ಯವಾಗಿದೆ ಈ ಜೀವನ;

ಸೋತ ಮನಸು...

ಬದುಕು ಬಣ್ಣವ ಕಳೆದುಕೊಂಡ ಸಮಯ,
ಪ್ರೀತಿಯ ಬೆಳಕು ಆರಿದ ಶೂನ್ಯ ಹೃದಯ,
ನಾಳೆಯ ನಿರೀಕ್ಷೆಯೇ ಇರದ ಸೋತ-
ಮನಸಿನ ನೊಂದ ಭಾವನೆಗಳಿಗೆಲ್ಲಿದೆ ಮುಕ್ತಾಯ!!!

ಮೋಹದ ಮೂರ್ಖ ಮಾಲಿಕರು !

ಪಡೆದು ಕಳೆದುಕೊಂಡ ಆಸೆಗಳಿಗಿಲ್ಲ ಕೊನೆ,
ನುಡಿದ ನುಡಿಗಳಿಗಿಲ್ಲ ನಾಳೆಯ ಹೊಣೆ,
ಮುಕ್ತಿ ಕಾಣದ ಮೋಹಕ್ಕೆ ಮಾಲಿಕರಾಗುವ ಗಡಿಬಿಡಿ,
ಅಲ್ಪ ನೀ ಅರಿಯದಿರಲು ಅವನ ನಿಜದ ಮೋಡಿ;

ಇದು ಬಾಳ ಖರೆ ಮಾತೈತಿ..

                                    ಬದುಕು ಒಂದ ಟಿ.ವಿ ಪ್ರೋಗ್ರಾಮ್ ಐತ್ರೆಪ್ಪ!                               
                                                 ಒಬ್ಬಾವುಂದು ಮೆಗಾ ಧಾರಾವಾಹಿ ಇದ್ರ,
                                          ಇನ್ನೊಬ್ಬಾವುಂದು ಬರೇ ಜಾಹೀರಾತ್ ಇರ್ತೈತಿ..
                                                     ನಿಮ್ಮ ಮನದಾಗ ನಮ್ ಚಾನಲ್ಲು   
                                   ಯಾವ್ದೋ ಒಂದ್ ನಮ್ಬರ್ನ್ಯಾಗ ಚಾಲೂ ಐತಿ ಅನ್ನೂದಾ  
                                           ನಮ್ TRP "25" ಆಗಿರೋದ್ರ್ ಖರೇ ಗುಟ್ಟೈತಿ!

ಮುಸ್ಸಂಜೆಯ ಮನು......

                                                      ನೆತ್ತರ ಮಡಿಲಿನಲಿ ರವಿಯು ಮಲಗಿಹನು,
                                                     ಕಣ್ಣಿನಂಗಳವ ನಾಳಿನ ಬಣ್ಣದಿ ತುಂಬಿಹನು,
                                                      ನಲ್ಲೆಯ ನಾಚು ಕೆನ್ನೆಯ ಹೋಲುತಿಹನು;
                                                ಕೈಗೆ ಸಿಗನು,ನಯನದ ಬಾಹುವಿನಲಿ ಬಂದಿಯಿವನು;

ಕಂಬನಿ ಕವಿತೆ...

ಈ ನೋವಿನ ಕವಿತೆಗೆ 
ನಿನ್ನುಸಿರ ಮಿಲನದ 
ನಲುವಿನ ಕನಸಿನ ಬಲವಿದೆ;

ವಿರಹದ ಬಿರುಗಾಳಿಯಲಿ 
ನನ್ನೀ ಹೃದಯದಕ್ಷಿಯು 
ಒಲವ ರೆಪ್ಪೆಯಾಲಿಂಗನದ 
ಹುಸಿ ಬಯಕೆಯ
ಕಂಬನಿಯಲಿ ಕರಗಿದೆ;

ನಿನ್ನ ಜನ್ಮ ದಿನ,ನನಗದೇ ಪುಣ್ಯ ದಿನ...

ಈ ಸುದಿನ..
ವಸುದೇಯಾ ಮಡಿಲಲಿ ನೀ ನಕ್ಕ ದಿನ;
ಸೌಂದರ್ಯ ಕೊರಳ ಮಾಲೆಯೋಳು ಸ್ವಾತೀಮುತ್ತಿನ ಜನನ;
ಸಂಗೀತ ಸುಧೆಯೋಳು ನಿನ್ನ ದನಿಯ ಸೌರಭದ ಮಿಲನ,
ನಿನ್ನ ಮುದ್ದು ಮೊಗದ ಮುಗ್ಧ ನಗುವಿನ ಹೊಂಗಿರಣ 
ಇರಲಿ ಹೀಗೇ ಚಿರಂತನ;

ನಿಷ್ಕಾಮ ಬೆಳಕು...


                                      ನಾನು ಹೊಸಿಲ ದಾಟಿ,  ನಮ್ಮ ಹೃದಯ ಗುಡಿಯ ಸೇರಿ,
                                                       ಪ್ರೀತಿ ಹಣತೆ ಹಚ್ಚಲು,
                                ಚೆಲ್ಲಿ ಅದರ ಬೆಳಕು ಅಂತರಂಗದಲ್ಲಿ ಚೆಂದ ನಂದನವನ ಮೂಡಿ ಬೆಳಗಲು;
                                          ಆತ್ಮಕದುವೆ ಮುಕ್ತಿ ಈಯ್ವ ಕಳಸ ಹೊತ್ತ ದೇಗುಲ!!

ಬದುಕ ಸಂಭ್ರಮ...

ಮುಂಗಾರಿನ ಮೊದಲ ಮಳೆಯ ಮೊದಲ ಹನಿಯ 
ಮಧುರ ಸಿಂಚನಕೆ,
ಭೂ ದೇವಿಗೆ ಹಸಿರ ಸಂಭ್ರಮ !
ನಿನ್ನ ಮೊದಲ ಭೇಟಿಯ ಮೊದಲ ನೋಟದ 
ಒಲವ ಸಿಂಚನಕೆ,
ನನಗೆ ಬದುಕ ಸಂಭ್ರಮ !

ಗುರುವಾರ, ಜೂನ್ 6, 2013

ನೀ ಬರುವವರೆಗೆ..

ಈ ಮನಸಿರುವುದು ನನಗರಿವಿರಲಿಲ್ಲ
ನೀ ಬರುವವರೆಗೆ..
ನನ್ನ ಬದುಕ ಶೃಂಗಾರ,
ಬದಲಾವಣೆಯ ಅಲಂಕಾರ,
ನಿನ್ನ ಕಣ್ಣಲ್ಲಿ ನನ್ನ ನಾ ಕಾಣಲೆಂದೆ;

ನೆನ್ನೆಯವರೆಗೆ ಈ ಕನಸು ಗಾಳಿಪಟ,
ಈ ರಾತ್ರಿ ನಿನ್ನ ನಗುವಿನ ಮಗು,
ಇಲ್ಲದಿರುವುದೆಲ್ಲ ಕಾಣುವ ಸತ್ಯ,
ಇರುವುದೆಲ್ಲ ನಾಳಿನ ಮಿಥ್ಯ;

ನಿನ್ನೊಲವಿನ ಮಾಯೆ ಜಗದ ಮಿತಿಯ ಮರೆಸಿದೆ,
ನವೋಲ್ಲಸದ ಜೇನಾ ಉಣಿಸಿದೆ,
ಎನಾದರೂ ನೀ ಬರೀ ನೆನಪೆ,
ಆ ನೆನಪಲಿ ಈ ಬದುಕು ಸೊಗಸೇ??

ಮೌನ ಬದುಕು!!!!

ನನ್ನ ಬದುಕಲಿ ನನ್ನ ನಾ ಕಾಣಲಿಲ್ಲ,
ಈ ಮನದ ಮೌನವು ಮಾತಾಗಲಿಲ್ಲ,
ಹುಡುಕಿ ಹೊರಟ ಸೊಗವು ಸತ್ಯವಲ್ಲ;

ನಾ ಗಳಿಸಿದ ನನ್ನದಾವುದೂ ನನ್ನದಲ್ಲ,
ಕ್ಷಣಿಕ ಆಸೆಗೆ ಕಾಲದ ಅರಿವಿಲ್ಲ,
ಕತ್ತಲೆಯೊಳು ಬಣ್ಣದ ಕಲ್ಪನೆಯೇ ಬದುಕಾಯಿತಲ್ಲ;
ಪ್ರೇಮಪಕ್ಷೀಯು ಸ್ವಾರ್ಥಪಂಜರದಿ ಬಂಧಿಯಾಯಿತಲ್ಲ;

ಕನಸಿಗೂ ನೋವ ತೆರಿಗೆಯ ಕಟ್ಟುವವರು ನಾವು,
ಮುರ್ಖರೊಳು ಜಾಣತನವ ಅಳೆಯುವವರು ನಾವು,
ನಗುವ ನಾವು ಈ ಮನಸು ಮಗುವಾಗುವ ಹಾಗೆ,
ನಾವಾಗುವ ನಾವು ಉದಿತವಾಗುವ ಮುನ್ನ
ನಮ್ಮೊಳಗಿರುವ ಸಾವು!

ಬುಧವಾರ, ಮೇ 29, 2013

ನೆನಪಿಗೆಲ್ಲಿದೆ ಜಾಗ?

ಮರೆಯುವುದಾದರೂ ಹೇಗೆ?
ನೀನೇ ನಾನಾಗಿರುವಾಗ;
ನೆನಪಿಗೆಲ್ಲಿದೆ ಜಾಗ?
ಮನಸೇ ನೀನಾಗಿರುವಾಗ;
ವಿರಹಕೆಲ್ಲಿದೆ ಜಾಗ?
ಹೃದಯದ ಮಿಡಿತವೇ- 
ನಿನ್ನ ಅನುಮತಿಗೆ ಕಾದಿರುವಾಗ;
ಬದುಕಿಗೆಲ್ಲಿದೆ ಜಾಗ?
ನನ್ನ ನೀ ಆವರಿಸಿರುವಾಗ;

ತುಕ್ಹಿಡಿದ ಕಬ್ಬಿಣ ಎನ್ನ ಕವಿತೆ

ತುಕ್ಹಿಡಿದ  ಕಬ್ಬಿಣ ಎನ್ನ ಕವಿತೆ;
ಹಳೆ ಪದಗಳ ದೊಂಬರಾಟ,
ಹೊಸ ಪದಗಳ ಪರದಾಟ,
ಸಂಗಮದಿ ಮೂಡಿದ ತುಕ್ಹಿಡಿದ ಕಬ್ಬಿಣ ಎನ್ನ ಕವಿತೆ;

ಬರಗೆಟ್ಟ ಭಾವನೆಗಳ ಬಯಲಾಟ,
ಕಂಗೆಟ್ಟ ಕನಸುಗಳ ಕಾದಾಟ,
ಮಾನಗೆಟ್ಟ ಮನಸಿನ ಮುರುಕಾಸಿಗೂ 
ಸಲ್ಲದೆ ಮೂಡಿದ ತುಕ್ಹಿಡಿದ  ಕಬ್ಬಿಣ ಎನ್ನ ಕವಿತೆ;

ಕಾತುರದ ಕಾಲಿಗೆ ಕಾಲವು ಶರಣಾಗಿ,
ಆತುರಗೆಟ್ಟ ಹಂಬಲಗಳು ಒಂದಾಗಿ,
ನನ್ನ ಗೆಳತಿಯ ತಲೆನೋವಿನೊಂದಿಗೆ,
ಮೂಡಿದ ತುಕ್ಹಿಡಿದ ಕಬ್ಬಿಣ ಎನ್ನ ಕವಿತೆ;

ಒಲವೇನೆನ್ನಲು ನೀ ಗೆಳತಿ

                                                      ಒಲವೇನೆನ್ನಲು ನೀ ಗೆಳತಿ
                                                         ಹೇಳಲಿ ನಾ ಏನನು?
                                                   ನಿನ್ನ ನೆನಪುಗಳಲ್ಲೇ ಬದುಕುವ,
                                              ಎನ್ನ ಕನಸುಗಳ ಸಿರಿಯ ಒಲವೆನ್ನಲೇ?
                                               ನಾ ಬರೆದ ಪದಗಳೆಲ್ಲ ನಿನ್ನ ಹೆಸರಾಗಿ,
                                                   ಅದರಂದದ ಅಮಲಲಿ ಚಿಮ್ಮುವ
                                                  ಹರುಷದ ಹೊನಲ ಒಲವೆನ್ನಲೇ?
                                               ನಿನ್ನ ಸನಿಹದ ಹಂಬಲದಲಿ ನಾಗೈವ,
                                              ಈ ವಿರಹದ ತಪವನೇ ಒಲವೆನ್ನಲೇ?
                                        ನಿನ್ನ ನಗೆ ಚಂದ್ರಮನ ಹೊಳೆವ ತಿಂಗಳ ಬೆಳಕನು
                                       ಹೊದ್ದು ಮಲಗುವ ನನ್ನೀ ಸಡಗರವ ಒಲವೆನ್ನಲೇ?
                                                       ಒಲವೇನೆನ್ನಲು ನೀ ಗೆಳತಿ..

ಮಂಗಳವಾರ, ಮೇ 28, 2013

ಮನದಾಗಸದ ಪ್ರೇಮಚಂದ್ರಿಕೆ

                                               ನನ್ನೆದೆಯಾಳದಲಿ ನಿನ್ನ ಸವಿಗನಸಿನ ಮನೆಯ ಮಾಡಿ,
                                                  ನನ್ನ ನಾಳೆಗಳನು ನಿನ್ನ ನಗುವಿಗೆ ಮಾರಿಹೆನು;
                                                            ನನ್ನ ಪ್ರೇಮಚಂದ್ರಿಕೆಯೆ ನೀ;
                                                     ನಿನ್ನಾಗಮನದಿ ಬೆಳದಿಂಗಳೆನ್ನ ಬಾಳು;

ಬದುಕು ಎಂದಿಗಿಂತ ಭಾರ!!!



ಮರೆತರು ಮರೆಯಲಾಗದ ಹೆಸರು,
ಕಣ್ಣ ಮುಚ್ಚಿದರೂ ಕಾಡುವ ಹೊಳಪು;
ಕನಸ ದಾರಿಗಳೆಲ್ಲ ನಿನ್ನೊಲವ ಊರ ಸೇರಿರಲು,
ಬದುಕು ಎಂದಿಗಿಂತ ಭಾರ!

ನನ್ನೊಳಗೆ ನೀನಿರಲು, 
ಕಾಡುವುದೆಕೋ ಈ  ದೂರದ ಭೀತಿ;
ಬಾಳ ಬೆಳಕೆ ನಿನ್ನ ಹೊಳಪಾಗಿರಲು,
ನಿನ್ನ ಹುಡುಕಾಟವೊಂದೇ ಕಣ್ಣಿನ ವೃತ್ತಿ;
ಎನ್ನ ಭಾವಲೋಕವೇ ನಿನ್ನೊಲವಿಗೆ ಮುಡುಪಾಗಿರಲು,
ಬದುಕು ಎಂದಿಗಿಂತ ಭಾರ!

ಬುಧವಾರ, ಏಪ್ರಿಲ್ 3, 2013

ಜಗವ ಮರೆತ ಕವಿಯು ನಾ!!!

ಬೇಡದ ಮನಸ್ಸು ನಾ ನಿನಗೆ,
ಸಿಗದ ಕನಸು ನೀ ಎನಗೆ;
ಸಿಗದ ಬೇಕುಗಳಿಗೆ ಕೊನೆಯಿಲ್ಲ,
ಬೇಡದ ಪ್ರೀತಿಗೆ ಬೆಲೆಯಿಲ್ಲ;

ದೂರ ಹೋದಷ್ಟೂ ಹತ್ತಿರ 
ನಾ ನಿನ್ನ ನೆನಪಿಗೆ;
ಕಣ್ಣ ಮುಚ್ಚಿದಷ್ಟೂ ದಿಗ್ಮೂಢ
ನಾ ನಿನ್ನ ಹೊಳಪಿಗೆ; 
ನಿನ್ನ ಮಡಿಲಲಿ ಆ ದಾವಣಿಯ ನೆರಳಲಿ,
ಜಗವ ಮರೆತ ಕವಿಯು ನಾ;

ಸ್ನೇಹ !


ನೆತ್ತರಿಲ್ಲಿ ಸಂಬಂಧಿಕನಲ್ಲ,
ಲಾಭ ಲೋಕದ ಆಸರೆಯು ಬೇಕಿಲ್ಲ; 
ನಲಿವ ಮಿಲನದಿ,ಕನಸಿನ ಬಲದಿ 

ಹುಟ್ಟಿದಾಮೃತವೆ ಸ್ನೇಹ;

ಸೋಮವಾರ, ಏಪ್ರಿಲ್ 1, 2013

ಹೃದಯದ ಕರೆಯೋಲೆ....

ಸಾವಿರ ಕವಿಗಳ ಪದಗಳ ಸಾಲ ಪಡೆದು,
ನೂರು ನಾಲಿಗೆಯೊಳು ನಲಿದ ಎರವಲು ವಾಕ್ಯದಿ,
ಹತ್ತು ಅನಿಸಿಕೆಗಳಿಂದ ಅಲಂಕರಿಸಿ,
ಬರೆದೆನೊಂದು ಪತ್ರವ ಗೆಳತಿ; 

ಕನಸಿನ ಲೇಖನಿ ಹಿಡಿದು,
ಬಯಕೆಯ ಶಾಹಿ ಸುರಿದು,
ಹುಟ್ಟಿದ ಪದ ಮುತ್ತುಗಳು
ನಿನ್ನೊಡಲ ಸೇರುವ ತವಕದಿ,
ಬರೆದೆನೊಂದು ಪತ್ರವ ಗೆಳತಿ;

ಉತ್ತರದ ನಿರೀಕ್ಷೆಯ ಗೋಪುರವ ಕಟ್ಟಿ,
ಕಾತರದ ಚೆಲುವಿಗೆ ಮರುಳನಾಗಿ,
ಕಲ್ಪನಾ ಲೋಕದ ನಿವಾಸಿಯಾಗಿ,
ಮನದ ಮರದ ಕೋಗಿಲೆಯ ಗಾನದೊಳು,
ಬರೆದೆನೊಂದು ಪತ್ರವ ಗೆಳತಿ;

ಸೇರಲದು ನಿನ್ನ ಕಣ್ಣಿನರಮನೆಯ,
ಹೃದಯದಂಗಳದ ಹೂಮಳೆಗೆ
ಚಿಗುರಲೊಂದು ಪ್ರೇಮ ಗುಲಾಬಿ;




ಗುರುವಾರ, ಫೆಬ್ರವರಿ 28, 2013

ಮನಸಾಯನ ಮಧುರ ಮನಸ್ಸಿನ ಅಕ್ಷರಗಳ ಪಯಣ




ನನ್ನ ಮನದ ಮಿಡಿತಗಳಿಗೆ ಭಾಷೆಯ ಬಣ್ಣ ಬಳೆದು,
ಪ್ರೀತಿಯ ಮಕರಂದವ ಬೆರೆಸಿರೆ,
ಅರಳಿದ ಪ್ರೇಮ ಸುಮವೇ-
ಈ ಮನಸಾಯನ;

ನಿನ್ನ ಸವಿನೆನಪಿನ ನಕ್ಷತ್ರಗಳ, 
ಕವಿತೆಗಳ ರೇಖೆಯಿಂ ಜೋಡಿಸಿರೆ,
ಮೂಡುವ ರಂಗೋಲಿಯ ಚಿತ್ತಾರವೇ-
ಈ ಮನಸಾಯನ;

ನಿನ್ನ ಹೃದಯದ ತಾಳಕೆ,
ಎನ್ನ ಭಾವದ ಮೇಳಕೆ,
ಮಧುರ ಪ್ರೇಮಗಾನವೇ-
ಈ ಮನಸಾಯನ;

ನನ್ನ ಮನದ ಮೋಡವು ನಿನ್ನೊಲವಿಗೆ ಕರಗಲು,
ಸುರಿವ ಪದಗಳ ಸೋನೆಯೇ-
ಈ ಮನಸಾಯನ;

ನಿನ್ನ ಸಾಂಗ್ಯಾತದ ತವಕದಲಿ,
ಕುಣಿವ ಬಯಕೆಗಳ,
ಕನಸಿನ ಕಾಗುಣಿತವೇ-
ಈ ಮನಸಾಯನ;

ನನ್ನೆದೆಯ ಭಾವಲೋಕದಿ,
ನಿನ್ನ ನಯನದ ಬೆಳಕಲಿ,
ಉದಯಿಸಿದ ಕವನಗಳ, 
ಪ್ರೇಮ ಪಲ್ಲಕಿಯ ಮೆರೆವಣಿಗೆಯೇ-
ಈ ಮನಸಾಯನ;

ನನ್ನದೆಗೂಡಿನ ಮಿಡಿತದಲಿ,
ಮನದಾಳದ ತುಡಿತದಲಿ,
ಜನಿಸಿದ ನಿನ್ನುಸಿರಿನ ನಿರೀಕ್ಷೆಯ ಮಂದಹಾಸವೇ-
ಈ ಮನಸಾಯನ;

ಹೃದಯದಿ ಪ್ರೀತಿಯು ಪಲ್ಲವಿಸಿದವಳು,
ಕನಸಿಗೆ ರೂಪವ ಕೊಟ್ಟವಳು,
ಸವಿನೆನಪಾಗಿಯೇ ಉಳಿದವಳು,
ಅವಳಿಗೀ ಕಾವ್ಯಸಮರ್ಪಣೆಯು!!!

ಬುಧವಾರ, ಫೆಬ್ರವರಿ 27, 2013

ಒಲವ ನದಿ..

ಯಾರಿಗಾಗಿ ಹೇಳೇ ನಿನ್ನೀ ಶೃಂಗಾರ;

ಹೊಳೆವ ಸೀರೆಯನುಟ್ಟು,
ಬಿಂಕದೊಡವೆಯ ತೊಟ್ಟು,
ಯಾರೆಡೆಗೆ ಹೇಳೇ 

ನಿನ್ನೀ ಪ್ರೇಮ ಪಯಣವು;

ನಿನ್ನಂತರಂಗದ ಗಾನವು,

ನಲ್ಲನೆದೆಯ ಮಿಡಿತದಿ ಮಿಡಿದು-
ಇಂಪಾಗಿಸಿದೆ ನೀ 

ಈ ಪ್ರಕೃತಿಯ ಶೃತಿಯ;

ನಿನ್ನ ಮಿಲನದಂಬಲದ 

ಉಕ್ಕು ಕರಗಿಸಿದೆ 
ಗಿರಿ-ಕಾನನಗಳ ಮೂರ್ತವ;

ನಲ್ಲ ಸಾಗರನ,

ಮೆಲು ದನಿಗೆ
ನಿನ್ನ ಒಡಲರ್ಪಣದಿ;
ಮೌನ ಜಗವಿಂದು 

ಗುನುಗಿದೆ ನಿನ್ನ ಸಂಗೀತವ;
ಜಗದಿ ಯಾವ ಪ್ರೇಮಿಯು
ಜಯಿಸಲಾರ ನಿನ್ನ
ಪ್ರೇಮ ಮಥನದಿ;

ನಿಮ್ಮ ಸಮಾಗಮವ

ನೋಡ ಬಯಸಿ,
ಪೂರ್ಣ ಚಂದಿರನಿಲ್ಲಿ 

ತನ್ನ ಬಳಗವ ಕರೆದಿಹೆನು;

ನಿಮ್ಮ ಒಲವಿನ ಚೆಲುವಲಿ ಲೋಕದ ಯಾತನೆಯು ಮರೆಯಾಗಲಿ;

ನನ್ನ ಕನಸಿನ ಮಲ್ಲಿಗೆಗೆ

ನಿನ್ನ ಒಲವಿನಾಗಮನದಿ 
ನಿತ್ಯ ನೂತನವೀ  ಜೀವನ;

ಕಷ್ಟ ಕಾರ್ಮೋಡಗಳು ನಿನ್ನ ಕಣ್ಣಿನ ಸೆಳೆತದಿ ಕರಗಿ,
ನಿನ್ನ ನಗುವಿನ ತುಂತುರಿಗೆ
ಅರಳೆನ್ನ ಒಲವಿನ ಮಲ್ಲಿಗೆಯು;

ನನ್ನ ಕನಸಿನ ಒಡತಿ
ಬಾ ಎನ್ನ ಒಲವಿನ ಚಂದಿರನ ಮಂದಿರಕೆ;

ನಿನ್ನ ಚೆಲುವಿನ ಉಡುಗೊರೆ..

ನನ್ನ ಕನಸಿನ ಮನಸಿದು,  
ಸೋತಿಹುದು ನಿನ್ನ ನಗುವಿನ ಸೊಗಸಿಗೆ ;
ಹಗಲಿರುಳು ನಿನ್ನ ಸವಿನೆನಪಿನ ಮೊಗವೇ, 
ತುಂಬಿಹುದು ಅದರ ನಯನದಂಗಳವ ;
ನನ್ನ ವಿರಹಿಯೂ, ನಿನ್ನ ಒಲವಿನಧಾರೆಯಲಿ ಮಿಂದಿರಲು,
ಸಿಗುವುದೆಂದೊ ಎನಗೆ ನಿನ್ನ ಚೆಲುವಿನ ಉಡುಗೊರೆಯು;

ಗುರುವಾರ, ಫೆಬ್ರವರಿ 21, 2013

ನಿನ್ನ ಪ್ರೇಮ ದೀಪ.


ಮನವಿದುವೆ ಮೋಹದ ಕೂಪ;
ಹೃದಯದಿ ದಿನಕರನಾಗಮನವು,
ಅರಳಿರಲು ನಿನ್ನ ಪ್ರೇಮದ ದೀಪ;
ಏಕಾಂಗಿ ಸಂಜೆಯು,
ನಿನ್ನ ದನಿಯ ಹಾರೈಕೆಯಲಿ,
ಲೀನಿಸಿದೆ ನೋವ ಕತ್ತಲೆಯ ಬಾಹುವಿನಲಿ.

ಮನಸ್ಸು ಮಣ್ಣಿನ ಗೊಂಬೆ..

ಮಣ್ಣಿನ ಗೊಂಬೆ ಎನ್ನ ಮನಸ್ಸು,
ಪ್ರೀತಿಯ ಬಣ್ಣ ಬಳೆದು,ಪ್ರೇಮದಾಭರಣದಿಲಂಕರಸಿ,
ಲಜ್ಜೆಯ ಬೊಟ್ಟನ್ನಿಟ್ಟು,  ನಿನ್ನಂಗೈಲಿಟ್ಟಿಹೆನು ಚೆಲುವೆ;
ಒಲವಲಿ ನಿನ್ನ ಹೃದಯದರಮನೆಯ ಸೇರಲಿ,
ನೋವಲಿ ತಮ ಕಾನನವ ಸೇರಲಿ,
ಸಾವೆನ್ನ ಅಪ್ಪುವವರೆಗೂ,
ನಿನ್ನ ಸ್ಮರಣೆಯೊಂದೇ ನನಗಿರಲಿ;

ಗುರುವಾರ, ಫೆಬ್ರವರಿ 14, 2013

ನನ್ನೊಲವಿನ ಪ್ರೇಮಕುಸುಮ...

ನನ್ನೊಲವಿನ ಉಯ್ಯಾಲೆಯ
ಭಾವದೋಟದ ಪ್ರೇಮಕುಸುಮಕೆ,
ಪ್ರೀತಿ ಇಬ್ಬನಿಯೊಡವೆ ತೊಡಿಸಿರೆ,
ನಿನ್ನ ಮುಡಿಗದು ಅರ್ಪಣೆ; 
ಆ ಸುಮದ ಗಮಕೆ,
ನಿನ್ನ ನಲುಮೆಯ ಹೂವರಳಲಿ;
ಅದರಂದದ ಧನ್ಯತೆಯು, 
 ಈ ಏಕಾಂಗಿಯ ಬದುಕಾಗಲಿ;

ಬುಧವಾರ, ಫೆಬ್ರವರಿ 13, 2013

ಸಮಾಜ

ನಾ(ಮನುಷ್ಯ) ನಿನ್ನ ಅಂತರಂಗ
ನೀ(ಸಮಾಜ) ನನ್ನ ಬಹಿರಂಗ;

ನನ್ನ ನನಸುಗಳಿವು ನಿನ್ನ ವರವಾ ಕಾದಿಹವು,
ಈ ನಗುವೇತಕೆ ಹೇಳುನೀ ತಿರುಕನಾದರೂ;

ನನ್ನ ಭಾವನೆಗಳಿಗಿಲ್ಲ ನಿನ್ನಲ್ಲಿ ಬೆಲೆ,
ನಿನ್ನ ಕಾನೂನುಗಳಿಗೆ ನಾನಾದೆನು ಸೆರೆ;

ನಿನ್ನ ಶೂನ್ಯಾಗಸದ ಕೆಳಗೆ,
ಕಮರಿದೆ ಈ ಬದುಕ ಬೆಳಕು,

ನನ್ನ ಅಂತಃಕರಣದ ಬೆಳಕಲಿ,
ನಿನ್ನ ಅನಾಚಾರವು ಅಭಿಭವಿಸಲಿ;

ಲೋಕದೊಡೆಯನಿಗೆ ವಂದನೆ

ನವಭಾರತ ಯೌವನಾಧಿಪತಿಗಳು,
ಆಗಿಹೆವು ಅಜ್ಞಾನಪುಷ್ಪದಲಂಕಾರಿಗಳು;
ಮದವೇ ಮಾವುತನಾಗಿ,ಲೋಭವಸ್ತ್ರವನುಟ್ಟು,
ಮೋಹದಾರಾಧನೆಯಲಿ,
ಅರಿವಿನ ಸ್ಮಶಾನದಿ ಸಾಮ್ರಟರಾಗಿಹೆವು;
ಮತಿಹೀನ ಮನದಜ್ಞಾನದ ತಮವ ಕರಗಿಪ,
ಜ್ಞಾನಜ್ಯೋತಿಯನು ಕರುಣಿಸು ಗುರುವೇ;

ಕಾಣದ ಗೆಲುವಿನ ಕನಸಿನಲಿ,
ಕಾಣುವ 'ಕರ್ಮ'ಕೆ ಅಂಧರು ನಾವು;

ಈ ಬಾಳತೊರೆಯು ಅನಂತವಾಗಲಿ,
ನಿನ್ನರಿವಿನ ಸಾಗರ ಸಂಗಮದಿ;
ಇಂದ್ರಿಯ ಪ್ರಜ್ಞೆಯ ಪರದೆಯು ಸರಿದು
ಆತ್ಮನ್ವೇಷಣ ಸಾಧನೆ ನಡೆಯಲಿ
ನಿನ್ನಯ ಜ್ಞಾನದ ಮಡಿಲಲಿ;


ಬೇಡವಾದರೂ ನೀ ಜಗಕೆ,
ನಿನ್ನ ವಿವೇಕವಾಣಿಗೆ ಸಾವಿಲ್ಲ;
ಈ ಜಗದ ಸೊಬಗೇ ನೀನಾದರೂ
ಅದ ಗುರುತಿಸದಾದೆವು ಮೌಡ್ಯದಲಿ;


ಬಾಲಿಶದಿ ಸಂತೋಷಕೆ ಕುಣಿದರು,
ಆಸೆಯ ನೋವಿಗೆ ಕೊರಗಿದರು,
ನಿನ್ನೊಡಲೇ ಮುಕ್ತಿಮಂದಿರವು ನಮಗೆ;
ನಿನ್ನ ದರುಶನ ನಯನಕೆ ತೇಜಸ್ಸು;
ದಿನಕರ ತನ್ನಕ್ಷಿಯನಾವರಿಸಿ,
ನಮಿಸಿದ ತನ್ನ ಭಕ್ತಿ ಬೆಳದಿಂಗಳ ಕಾಣಿಕೆಯನಿಟ್ಟು;

ನಿಮ್ಮ ಪರಮಜ್ಞಾನದಲಿ ಮಿಯಲೆನ್ನ ಅಂತರಾತ್ಮ ಪ್ರಭುವೇ;
ಇಂದ್ರಿಯ ಲೋಕಕೆ ಸಾವೇ ಅಧಿಪತಿ;
ವಿವೇಕಾನಂದದಿ ಪರಮಾತ್ಮನಲಿ ಮುಕ್ತಿ;