ಬುಧವಾರ, ಮೇ 29, 2013

ನೆನಪಿಗೆಲ್ಲಿದೆ ಜಾಗ?

ಮರೆಯುವುದಾದರೂ ಹೇಗೆ?
ನೀನೇ ನಾನಾಗಿರುವಾಗ;
ನೆನಪಿಗೆಲ್ಲಿದೆ ಜಾಗ?
ಮನಸೇ ನೀನಾಗಿರುವಾಗ;
ವಿರಹಕೆಲ್ಲಿದೆ ಜಾಗ?
ಹೃದಯದ ಮಿಡಿತವೇ- 
ನಿನ್ನ ಅನುಮತಿಗೆ ಕಾದಿರುವಾಗ;
ಬದುಕಿಗೆಲ್ಲಿದೆ ಜಾಗ?
ನನ್ನ ನೀ ಆವರಿಸಿರುವಾಗ;

ತುಕ್ಹಿಡಿದ ಕಬ್ಬಿಣ ಎನ್ನ ಕವಿತೆ

ತುಕ್ಹಿಡಿದ  ಕಬ್ಬಿಣ ಎನ್ನ ಕವಿತೆ;
ಹಳೆ ಪದಗಳ ದೊಂಬರಾಟ,
ಹೊಸ ಪದಗಳ ಪರದಾಟ,
ಸಂಗಮದಿ ಮೂಡಿದ ತುಕ್ಹಿಡಿದ ಕಬ್ಬಿಣ ಎನ್ನ ಕವಿತೆ;

ಬರಗೆಟ್ಟ ಭಾವನೆಗಳ ಬಯಲಾಟ,
ಕಂಗೆಟ್ಟ ಕನಸುಗಳ ಕಾದಾಟ,
ಮಾನಗೆಟ್ಟ ಮನಸಿನ ಮುರುಕಾಸಿಗೂ 
ಸಲ್ಲದೆ ಮೂಡಿದ ತುಕ್ಹಿಡಿದ  ಕಬ್ಬಿಣ ಎನ್ನ ಕವಿತೆ;

ಕಾತುರದ ಕಾಲಿಗೆ ಕಾಲವು ಶರಣಾಗಿ,
ಆತುರಗೆಟ್ಟ ಹಂಬಲಗಳು ಒಂದಾಗಿ,
ನನ್ನ ಗೆಳತಿಯ ತಲೆನೋವಿನೊಂದಿಗೆ,
ಮೂಡಿದ ತುಕ್ಹಿಡಿದ ಕಬ್ಬಿಣ ಎನ್ನ ಕವಿತೆ;

ಒಲವೇನೆನ್ನಲು ನೀ ಗೆಳತಿ

                                                      ಒಲವೇನೆನ್ನಲು ನೀ ಗೆಳತಿ
                                                         ಹೇಳಲಿ ನಾ ಏನನು?
                                                   ನಿನ್ನ ನೆನಪುಗಳಲ್ಲೇ ಬದುಕುವ,
                                              ಎನ್ನ ಕನಸುಗಳ ಸಿರಿಯ ಒಲವೆನ್ನಲೇ?
                                               ನಾ ಬರೆದ ಪದಗಳೆಲ್ಲ ನಿನ್ನ ಹೆಸರಾಗಿ,
                                                   ಅದರಂದದ ಅಮಲಲಿ ಚಿಮ್ಮುವ
                                                  ಹರುಷದ ಹೊನಲ ಒಲವೆನ್ನಲೇ?
                                               ನಿನ್ನ ಸನಿಹದ ಹಂಬಲದಲಿ ನಾಗೈವ,
                                              ಈ ವಿರಹದ ತಪವನೇ ಒಲವೆನ್ನಲೇ?
                                        ನಿನ್ನ ನಗೆ ಚಂದ್ರಮನ ಹೊಳೆವ ತಿಂಗಳ ಬೆಳಕನು
                                       ಹೊದ್ದು ಮಲಗುವ ನನ್ನೀ ಸಡಗರವ ಒಲವೆನ್ನಲೇ?
                                                       ಒಲವೇನೆನ್ನಲು ನೀ ಗೆಳತಿ..

ಮಂಗಳವಾರ, ಮೇ 28, 2013

ಮನದಾಗಸದ ಪ್ರೇಮಚಂದ್ರಿಕೆ

                                               ನನ್ನೆದೆಯಾಳದಲಿ ನಿನ್ನ ಸವಿಗನಸಿನ ಮನೆಯ ಮಾಡಿ,
                                                  ನನ್ನ ನಾಳೆಗಳನು ನಿನ್ನ ನಗುವಿಗೆ ಮಾರಿಹೆನು;
                                                            ನನ್ನ ಪ್ರೇಮಚಂದ್ರಿಕೆಯೆ ನೀ;
                                                     ನಿನ್ನಾಗಮನದಿ ಬೆಳದಿಂಗಳೆನ್ನ ಬಾಳು;

ಬದುಕು ಎಂದಿಗಿಂತ ಭಾರ!!!



ಮರೆತರು ಮರೆಯಲಾಗದ ಹೆಸರು,
ಕಣ್ಣ ಮುಚ್ಚಿದರೂ ಕಾಡುವ ಹೊಳಪು;
ಕನಸ ದಾರಿಗಳೆಲ್ಲ ನಿನ್ನೊಲವ ಊರ ಸೇರಿರಲು,
ಬದುಕು ಎಂದಿಗಿಂತ ಭಾರ!

ನನ್ನೊಳಗೆ ನೀನಿರಲು, 
ಕಾಡುವುದೆಕೋ ಈ  ದೂರದ ಭೀತಿ;
ಬಾಳ ಬೆಳಕೆ ನಿನ್ನ ಹೊಳಪಾಗಿರಲು,
ನಿನ್ನ ಹುಡುಕಾಟವೊಂದೇ ಕಣ್ಣಿನ ವೃತ್ತಿ;
ಎನ್ನ ಭಾವಲೋಕವೇ ನಿನ್ನೊಲವಿಗೆ ಮುಡುಪಾಗಿರಲು,
ಬದುಕು ಎಂದಿಗಿಂತ ಭಾರ!