ಭಾನುವಾರ, ಮೇ 18, 2014

ಬರೆದೆನೊಂದು ಪತ್ರವ ಗೆಳತಿ!!

ಅಸಂಖ್ಯ ಕವಿಗಳ ಹೃದಯದ ಭಾಷೆಯ
ಒಲವಿನ ಪದಗಳ ಸಾಲವ ಪಡೆದು;
ಅನಂತ ಹೃದಯಗಳುಲಿದಾ, ನಲಿದಾ
ಚೆಲುವಿನ ಮಾತುಗಳನೆರವಲು ಪಡೆದು;
ಮುಗಿಯದ ಕನಸುಗಳುಯ್ಯಾಲೆಯಲಿ
ತೂಗುವ ಮನಸಿನ ಪುಟಗಳ ಮೇಲೆ
ಬರೆದೆನೊಂದು ಪತ್ರವ ಗೆಳತಿ!

ಬಣ್ಣದ ಕನಸಿನ ಲೇಖನಿ ಹಿಡಿದು,
ಬಗೆ ಬಗೆ ಬಯಕೆಯ ಶಾಯಿಯ ಸುರಿದು,
ಹುಟ್ಟಿದ ಪದಗಳ ಮುತ್ತುಗಳನ್ನು
ನಿನ್ನಯ ಒಡಲಿಗೆ ಚೆಲ್ಲುವ ತವಕದಿ,
ಬರೆದೆನೊಂದು ಪತ್ರವ ಗೆಳತಿ!

ಉತ್ತರದ ನಿರೀಕ್ಷೆಯ ಗೋಪುರ ಕಟ್ಟಿ,
ಕಾತರದ ಚೆಲುವಿಗೆ ಮರುಳಾಗಿ,
ಕಲ್ಪನಾ ಲೋಕದ ನಿವಾಸಿಯಾಗಿ,
ಧ್ಯಾನಿಸಿ ಮನದ ಏಕಾಂತದೊಳು,
ಬರೆದೆನೊಂದು ಪತ್ರವ ಗೆಳತಿ;

ಕಾಣದೆ ಎಲ್ಲೋ ಕುಳಿತಿಹ ನಿನ್ನ,
 ತಲುಪಲಿ ನನ್ನೀ ಸಾಲುಗಳು;
ಬೀರಲು ಬಾಳಿಗೆ ಮಂದಾರವನ್ನ,
ಚಿಗುರಲಿ ಪ್ರೇಮ ಗುಲಾಬಿಗಳು;

ಗುರುವಾರ, ಫೆಬ್ರವರಿ 13, 2014

ಭ್ರಮೆ....


ಪ್ರೀತಿ ಕಾವ್ಯದೊಳಷ್ಟೇ ಸುಂದರ, 
ಮಾತಿನೊಳಷ್ಟೇ ಮಲ್ಲಿಗೆ:
ನಿಜದೊಳು ಹುಸಿಯಲಂಕಾರ, 
ನಂಬಿಕೆಯ ಭ್ರಮೆ, ಸುಳ್ಳಿನ ಅಮಲು...

ಈ ಬದುಕು ನಿನಗಾಗಿ ...



ನನ್ನ ಏಕಾಂತವೆಲ್ಲ ನಿನ್ನ ನೆನಪಿಗೆ ಸ್ವಂತ 
ನಿನ್ನ ನೆನೆಯುದೆ ಬದುಕಾಗಿರಲು
ಬದುಕೇ ನಿನಗೆ ಸ್ವಂತ;

ಸೋತ ಕಣ್ಣೀರಿನ ಹನಿಗಳಲಿ 
ನಿನ್ನ ಪ್ರತಿಬಿಂಬದ ಹುಡುಕಾಟವೊಂದೆ 
ನನಗುಳಿದ ಸಂಭ್ರಮ;

ಮುಗಿಯದಷ್ಟು ಮೋಹ ...


ಅಕ್ಷರದೊಳು ಮರೆಯಾದ ಆಸೆಗಳೆಷ್ಟೋ,
ಕವಿತೆಯೊಳು ಕಮರಿದ ಪ್ರೀತಿಗಳೆಷ್ಟೋ,
ಮಂಕು ಮನಸಿನ ಲೆಕ್ಕಾಚಾರದ
ಮೋಹ ಮುಗಿಯದಷ್ಟು !!

ಬರೆಯದ ಪತ್ರ !


ತಲುಪದೆಯೆ ನಿನ್ನ ಉಳಿದ ಪತ್ರವಿಂದು
ನನ್ನ ನಯನವ ಕಾಡಿದೆ..
ಸಮಯದ ಸೋಲಿಗೆ ಹೆದರೊ
ಹೃದಯವು ಕಮರಿದ ಸುಮವಾಗಿದೆ;

ಮಂಗಳವಾರ, ಫೆಬ್ರವರಿ 11, 2014

ಗೆಳತಿ ...


ಅಂಬರನ ಅಂಗಳದ 
ಚಂದಿರನ ಹಾಲ್ನಗೆಯ,
ನಿನ್ನ ಮಲ್ಲಿಗೆ ಮೊಗದ 

ಮೆರುಗು ಮಂಕಾಗಿಸಿದೆ;

ಈ ಹೃದಯವು ನಿನ್ನ ಸವಿ ನೆನಪಿನ 
ಸ್ವರದಲ್ಲಿ ಮಿಡಿಯುತಿಹುದು;
ನಿನ್ನ ಮಧುರ ಮೋಹದ 

ಒಲವ ಗೀತೆಯ ಹಾಡುತಿಹುದು;

ಶುಕ್ರವಾರ, ಫೆಬ್ರವರಿ 7, 2014

ನನ್ನ ನಾ ಕವಿ ಎನ್ನಲೇ ?


ನಿನ್ನ ನೆನಪಲ್ಲಿ ಬರೆದ ಪದಗಳೆಲ್ಲ ಕವಿತೆಯಾದರೆ
ನನ್ನ ನಾ ಕವಿ ಎನ್ನಲೇ ?
ನಿನ್ನ ಸೇರುವ ಬಯಕೆಯೊಂದೆ ನನ್ನ ಮನವಾಳುತಿರಲು
ನನ್ನ ನಾ ಪ್ರೇಮಿ ಎನ್ನಲೇ ?

ನವೋತ್ಸಾಹ

ಹೊಸ ಅಂತ್ಯದ ಆರಂಭ,
ನವ ನಿತ್ಯದ ಶುಭಾರಂಭ,
ಸವಿ ನೆನಪುಗಳ ಸಮಾರಂಭ!!

ದಿನವುರುಳಿ ಜಗವರಳಿ
ಮನದ ಕತ್ತೆಲೆಯಗಲಿ;
ನವ ವರುಷದ ನವ ಹರುಷದಿ
ನವೋತ್ಸಾಹ ಚಿಮ್ಮಲಿ!
ಹೊಸ ಬೆಳಗನು ಬೆಳಗಲಿ...

ಗುರುವಾರ, ಫೆಬ್ರವರಿ 6, 2014

ಮೊದಲ ಸಂಬಳ ...

ನನ್ನ.... 
ಕನಸಿನ ಹಕ್ಕಿಯ ತೊದಲ ಗಾನ
ನಲುಮೆಯ ಕೂಸಿಗೆ ಮೊದಲ ಚುಂಬನ
ರಾಶಿ ರಾಶಿ ಬಯಕೆಯ ಬಾಳಿಗೆ
ವಿಶ್ವಾಸದ ಆತ್ಮೀಯ ಆಲಿಂಗನ
ಬರುವ ನಾಳೆಗಳಿಗೆ ಜೀವನ ಸಂಭ್ರಮ

ಸವೆಯದ ಸೊಗದ ಮಾಲಿಕ ನೀ,
ಅಡಗಿಯೇ ನಿನ್ನ ನಯನದೊಳು  
ನನ್ನವರ ಹರುಷದ ಛಾಯೆ
ಪ್ರೇಯಸಿಯ ಪ್ರೀತಿಯ ಚೆಲುವು
ಗೆಳೆಯರ ನಲುಮೆಯ ನಗು
ಮಾಯಗಾರ ನಿನಗೆ,ನನ್ನ ನಮನ....   !!!

ಮಂಗಳವಾರ, ಡಿಸೆಂಬರ್ 17, 2013

ಬಾಳ ನೂರು ದಾರಿ!!!

ಹುಟ್ಟು ಸಾವಿನ ನಡುವೆ
ಸುಳ್ಳು ಸತ್ಯದ ಹಾದಿ
ಓಡಿ ನಡೆಯುತ
ನಡೆದು ನಿಲ್ಲುತ
ನಿಂತು ನರಳುತ
ಬದುಕೇ ಮುಗಿಯಿತಾ?


ಭಯದ ನೆರಳಲಿ
ದಾರಿ ಬದಲಿಸಿ
ಮನದ ಮರುಳಲಿ 
ಕನಸ ಕರಗಿಸಿ
ಧನದ ಉರುಳಲಿ 
ಪಯಣ ಸಾಗಿಸಿ
ಬಾಳ ಸವೆಸಬೇಕಿದೆ!


ಜಗದಿ ಗುರಿಗಳು ಬಹಳ
ಮುಟ್ಟುವ ಮನಗಳು ವಿರಳ
ಸೋಲಿನ ಮನೆಯಲಿ
ಗೆಲುವಿನ ನೆರಳು
ಕಾಣದೆ ಕಂಡ ನಲಿವಿಗೆ
ಬದುಕು ಮರುಳು!


ಮುಂದೆ ನೋಡದೆ
ಹಿಂದೆ ಕೇಳದೆ
ಜೊತೆಗೆ ನಡೆದ ಕಾಲು ಜಾರಿದೆ;
ಕೆಳಗೆ ಬೀಳುತ
ಮೇಲೆ ನೋಡುತ
ಎಲ್ಲ ಮರೆಯುತ
ಜೀವನ ಮೆರೆಸಬೇಕಿದೆ!


ಮುಗಿಯಿತೆನ್ನುವ ಮುನ್ನ
ಕೊನೆಯ ದಿಬ್ಬಣವು ಚೆನ್ನ 
ಬೆಳಗಲು ಸತ್ಯದ  ಜ್ವಾಲೆ
ಹುಸಿಯ ಸಮಾಧಿಯ ಮೇಲೆ
ಮರಣಕು ಮಂದಹಾಸದ
ಮೊಗವ ತೊಡಿಸಿ ಬದುಕಬೇಕಿದೆ
ಒಮ್ಮೆ ಬದುಕಬೇಕಿದೆ!!