ಗುರುವಾರ, ಫೆಬ್ರವರಿ 28, 2013

ಮನಸಾಯನ ಮಧುರ ಮನಸ್ಸಿನ ಅಕ್ಷರಗಳ ಪಯಣ




ನನ್ನ ಮನದ ಮಿಡಿತಗಳಿಗೆ ಭಾಷೆಯ ಬಣ್ಣ ಬಳೆದು,
ಪ್ರೀತಿಯ ಮಕರಂದವ ಬೆರೆಸಿರೆ,
ಅರಳಿದ ಪ್ರೇಮ ಸುಮವೇ-
ಈ ಮನಸಾಯನ;

ನಿನ್ನ ಸವಿನೆನಪಿನ ನಕ್ಷತ್ರಗಳ, 
ಕವಿತೆಗಳ ರೇಖೆಯಿಂ ಜೋಡಿಸಿರೆ,
ಮೂಡುವ ರಂಗೋಲಿಯ ಚಿತ್ತಾರವೇ-
ಈ ಮನಸಾಯನ;

ನಿನ್ನ ಹೃದಯದ ತಾಳಕೆ,
ಎನ್ನ ಭಾವದ ಮೇಳಕೆ,
ಮಧುರ ಪ್ರೇಮಗಾನವೇ-
ಈ ಮನಸಾಯನ;

ನನ್ನ ಮನದ ಮೋಡವು ನಿನ್ನೊಲವಿಗೆ ಕರಗಲು,
ಸುರಿವ ಪದಗಳ ಸೋನೆಯೇ-
ಈ ಮನಸಾಯನ;

ನಿನ್ನ ಸಾಂಗ್ಯಾತದ ತವಕದಲಿ,
ಕುಣಿವ ಬಯಕೆಗಳ,
ಕನಸಿನ ಕಾಗುಣಿತವೇ-
ಈ ಮನಸಾಯನ;

ನನ್ನೆದೆಯ ಭಾವಲೋಕದಿ,
ನಿನ್ನ ನಯನದ ಬೆಳಕಲಿ,
ಉದಯಿಸಿದ ಕವನಗಳ, 
ಪ್ರೇಮ ಪಲ್ಲಕಿಯ ಮೆರೆವಣಿಗೆಯೇ-
ಈ ಮನಸಾಯನ;

ನನ್ನದೆಗೂಡಿನ ಮಿಡಿತದಲಿ,
ಮನದಾಳದ ತುಡಿತದಲಿ,
ಜನಿಸಿದ ನಿನ್ನುಸಿರಿನ ನಿರೀಕ್ಷೆಯ ಮಂದಹಾಸವೇ-
ಈ ಮನಸಾಯನ;

ಹೃದಯದಿ ಪ್ರೀತಿಯು ಪಲ್ಲವಿಸಿದವಳು,
ಕನಸಿಗೆ ರೂಪವ ಕೊಟ್ಟವಳು,
ಸವಿನೆನಪಾಗಿಯೇ ಉಳಿದವಳು,
ಅವಳಿಗೀ ಕಾವ್ಯಸಮರ್ಪಣೆಯು!!!

ಬುಧವಾರ, ಫೆಬ್ರವರಿ 27, 2013

ಒಲವ ನದಿ..

ಯಾರಿಗಾಗಿ ಹೇಳೇ ನಿನ್ನೀ ಶೃಂಗಾರ;

ಹೊಳೆವ ಸೀರೆಯನುಟ್ಟು,
ಬಿಂಕದೊಡವೆಯ ತೊಟ್ಟು,
ಯಾರೆಡೆಗೆ ಹೇಳೇ 

ನಿನ್ನೀ ಪ್ರೇಮ ಪಯಣವು;

ನಿನ್ನಂತರಂಗದ ಗಾನವು,

ನಲ್ಲನೆದೆಯ ಮಿಡಿತದಿ ಮಿಡಿದು-
ಇಂಪಾಗಿಸಿದೆ ನೀ 

ಈ ಪ್ರಕೃತಿಯ ಶೃತಿಯ;

ನಿನ್ನ ಮಿಲನದಂಬಲದ 

ಉಕ್ಕು ಕರಗಿಸಿದೆ 
ಗಿರಿ-ಕಾನನಗಳ ಮೂರ್ತವ;

ನಲ್ಲ ಸಾಗರನ,

ಮೆಲು ದನಿಗೆ
ನಿನ್ನ ಒಡಲರ್ಪಣದಿ;
ಮೌನ ಜಗವಿಂದು 

ಗುನುಗಿದೆ ನಿನ್ನ ಸಂಗೀತವ;
ಜಗದಿ ಯಾವ ಪ್ರೇಮಿಯು
ಜಯಿಸಲಾರ ನಿನ್ನ
ಪ್ರೇಮ ಮಥನದಿ;

ನಿಮ್ಮ ಸಮಾಗಮವ

ನೋಡ ಬಯಸಿ,
ಪೂರ್ಣ ಚಂದಿರನಿಲ್ಲಿ 

ತನ್ನ ಬಳಗವ ಕರೆದಿಹೆನು;

ನಿಮ್ಮ ಒಲವಿನ ಚೆಲುವಲಿ ಲೋಕದ ಯಾತನೆಯು ಮರೆಯಾಗಲಿ;

ನನ್ನ ಕನಸಿನ ಮಲ್ಲಿಗೆಗೆ

ನಿನ್ನ ಒಲವಿನಾಗಮನದಿ 
ನಿತ್ಯ ನೂತನವೀ  ಜೀವನ;

ಕಷ್ಟ ಕಾರ್ಮೋಡಗಳು ನಿನ್ನ ಕಣ್ಣಿನ ಸೆಳೆತದಿ ಕರಗಿ,
ನಿನ್ನ ನಗುವಿನ ತುಂತುರಿಗೆ
ಅರಳೆನ್ನ ಒಲವಿನ ಮಲ್ಲಿಗೆಯು;

ನನ್ನ ಕನಸಿನ ಒಡತಿ
ಬಾ ಎನ್ನ ಒಲವಿನ ಚಂದಿರನ ಮಂದಿರಕೆ;

ನಿನ್ನ ಚೆಲುವಿನ ಉಡುಗೊರೆ..

ನನ್ನ ಕನಸಿನ ಮನಸಿದು,  
ಸೋತಿಹುದು ನಿನ್ನ ನಗುವಿನ ಸೊಗಸಿಗೆ ;
ಹಗಲಿರುಳು ನಿನ್ನ ಸವಿನೆನಪಿನ ಮೊಗವೇ, 
ತುಂಬಿಹುದು ಅದರ ನಯನದಂಗಳವ ;
ನನ್ನ ವಿರಹಿಯೂ, ನಿನ್ನ ಒಲವಿನಧಾರೆಯಲಿ ಮಿಂದಿರಲು,
ಸಿಗುವುದೆಂದೊ ಎನಗೆ ನಿನ್ನ ಚೆಲುವಿನ ಉಡುಗೊರೆಯು;

ಗುರುವಾರ, ಫೆಬ್ರವರಿ 21, 2013

ನಿನ್ನ ಪ್ರೇಮ ದೀಪ.


ಮನವಿದುವೆ ಮೋಹದ ಕೂಪ;
ಹೃದಯದಿ ದಿನಕರನಾಗಮನವು,
ಅರಳಿರಲು ನಿನ್ನ ಪ್ರೇಮದ ದೀಪ;
ಏಕಾಂಗಿ ಸಂಜೆಯು,
ನಿನ್ನ ದನಿಯ ಹಾರೈಕೆಯಲಿ,
ಲೀನಿಸಿದೆ ನೋವ ಕತ್ತಲೆಯ ಬಾಹುವಿನಲಿ.

ಮನಸ್ಸು ಮಣ್ಣಿನ ಗೊಂಬೆ..

ಮಣ್ಣಿನ ಗೊಂಬೆ ಎನ್ನ ಮನಸ್ಸು,
ಪ್ರೀತಿಯ ಬಣ್ಣ ಬಳೆದು,ಪ್ರೇಮದಾಭರಣದಿಲಂಕರಸಿ,
ಲಜ್ಜೆಯ ಬೊಟ್ಟನ್ನಿಟ್ಟು,  ನಿನ್ನಂಗೈಲಿಟ್ಟಿಹೆನು ಚೆಲುವೆ;
ಒಲವಲಿ ನಿನ್ನ ಹೃದಯದರಮನೆಯ ಸೇರಲಿ,
ನೋವಲಿ ತಮ ಕಾನನವ ಸೇರಲಿ,
ಸಾವೆನ್ನ ಅಪ್ಪುವವರೆಗೂ,
ನಿನ್ನ ಸ್ಮರಣೆಯೊಂದೇ ನನಗಿರಲಿ;

ಗುರುವಾರ, ಫೆಬ್ರವರಿ 14, 2013

ನನ್ನೊಲವಿನ ಪ್ರೇಮಕುಸುಮ...

ನನ್ನೊಲವಿನ ಉಯ್ಯಾಲೆಯ
ಭಾವದೋಟದ ಪ್ರೇಮಕುಸುಮಕೆ,
ಪ್ರೀತಿ ಇಬ್ಬನಿಯೊಡವೆ ತೊಡಿಸಿರೆ,
ನಿನ್ನ ಮುಡಿಗದು ಅರ್ಪಣೆ; 
ಆ ಸುಮದ ಗಮಕೆ,
ನಿನ್ನ ನಲುಮೆಯ ಹೂವರಳಲಿ;
ಅದರಂದದ ಧನ್ಯತೆಯು, 
 ಈ ಏಕಾಂಗಿಯ ಬದುಕಾಗಲಿ;

ಬುಧವಾರ, ಫೆಬ್ರವರಿ 13, 2013

ಸಮಾಜ

ನಾ(ಮನುಷ್ಯ) ನಿನ್ನ ಅಂತರಂಗ
ನೀ(ಸಮಾಜ) ನನ್ನ ಬಹಿರಂಗ;

ನನ್ನ ನನಸುಗಳಿವು ನಿನ್ನ ವರವಾ ಕಾದಿಹವು,
ಈ ನಗುವೇತಕೆ ಹೇಳುನೀ ತಿರುಕನಾದರೂ;

ನನ್ನ ಭಾವನೆಗಳಿಗಿಲ್ಲ ನಿನ್ನಲ್ಲಿ ಬೆಲೆ,
ನಿನ್ನ ಕಾನೂನುಗಳಿಗೆ ನಾನಾದೆನು ಸೆರೆ;

ನಿನ್ನ ಶೂನ್ಯಾಗಸದ ಕೆಳಗೆ,
ಕಮರಿದೆ ಈ ಬದುಕ ಬೆಳಕು,

ನನ್ನ ಅಂತಃಕರಣದ ಬೆಳಕಲಿ,
ನಿನ್ನ ಅನಾಚಾರವು ಅಭಿಭವಿಸಲಿ;

ಲೋಕದೊಡೆಯನಿಗೆ ವಂದನೆ

ನವಭಾರತ ಯೌವನಾಧಿಪತಿಗಳು,
ಆಗಿಹೆವು ಅಜ್ಞಾನಪುಷ್ಪದಲಂಕಾರಿಗಳು;
ಮದವೇ ಮಾವುತನಾಗಿ,ಲೋಭವಸ್ತ್ರವನುಟ್ಟು,
ಮೋಹದಾರಾಧನೆಯಲಿ,
ಅರಿವಿನ ಸ್ಮಶಾನದಿ ಸಾಮ್ರಟರಾಗಿಹೆವು;
ಮತಿಹೀನ ಮನದಜ್ಞಾನದ ತಮವ ಕರಗಿಪ,
ಜ್ಞಾನಜ್ಯೋತಿಯನು ಕರುಣಿಸು ಗುರುವೇ;

ಕಾಣದ ಗೆಲುವಿನ ಕನಸಿನಲಿ,
ಕಾಣುವ 'ಕರ್ಮ'ಕೆ ಅಂಧರು ನಾವು;

ಈ ಬಾಳತೊರೆಯು ಅನಂತವಾಗಲಿ,
ನಿನ್ನರಿವಿನ ಸಾಗರ ಸಂಗಮದಿ;
ಇಂದ್ರಿಯ ಪ್ರಜ್ಞೆಯ ಪರದೆಯು ಸರಿದು
ಆತ್ಮನ್ವೇಷಣ ಸಾಧನೆ ನಡೆಯಲಿ
ನಿನ್ನಯ ಜ್ಞಾನದ ಮಡಿಲಲಿ;


ಬೇಡವಾದರೂ ನೀ ಜಗಕೆ,
ನಿನ್ನ ವಿವೇಕವಾಣಿಗೆ ಸಾವಿಲ್ಲ;
ಈ ಜಗದ ಸೊಬಗೇ ನೀನಾದರೂ
ಅದ ಗುರುತಿಸದಾದೆವು ಮೌಡ್ಯದಲಿ;


ಬಾಲಿಶದಿ ಸಂತೋಷಕೆ ಕುಣಿದರು,
ಆಸೆಯ ನೋವಿಗೆ ಕೊರಗಿದರು,
ನಿನ್ನೊಡಲೇ ಮುಕ್ತಿಮಂದಿರವು ನಮಗೆ;
ನಿನ್ನ ದರುಶನ ನಯನಕೆ ತೇಜಸ್ಸು;
ದಿನಕರ ತನ್ನಕ್ಷಿಯನಾವರಿಸಿ,
ನಮಿಸಿದ ತನ್ನ ಭಕ್ತಿ ಬೆಳದಿಂಗಳ ಕಾಣಿಕೆಯನಿಟ್ಟು;

ನಿಮ್ಮ ಪರಮಜ್ಞಾನದಲಿ ಮಿಯಲೆನ್ನ ಅಂತರಾತ್ಮ ಪ್ರಭುವೇ;
ಇಂದ್ರಿಯ ಲೋಕಕೆ ಸಾವೇ ಅಧಿಪತಿ;
ವಿವೇಕಾನಂದದಿ ಪರಮಾತ್ಮನಲಿ ಮುಕ್ತಿ;

ಮರೆಯಾಯಿತೆನ್ನ ಹೃತ್ಪಕ್ಷಿ..............

ಇಹಲೋಕದಲಿ ತಾನೇನೆಂಬುದನು ಮರೆತು,
ಪರಲೋಕದ ಆಸೆಯಲಿ ಭಜಿಸಿ,
ಅನ್ಯರದಮಗಳಿಗೆ ಮೂಕನಾಗಿ,
ಸತ್ಕಾರ್ಯಗಳಿಗೂ ಬೇಡದವನಾಗಿ,
ಬರಡು ಕಾರ್ಮೋಡದ ಸುಳಿಯಲಿ ಮರೆಯಾಯಿತೆನ್ನ ಹೃತ್ಪಕ್ಷಿ;

ಸೋಮವಾರ, ಫೆಬ್ರವರಿ 4, 2013

ಪ್ರಕೃತಿಯ ಮಗುವಾಗು.

            
ಪ್ರಕೃತಾಂಭೆಯ ಜ್ಞಾನಮಂದಿರದಿ,
ಕಾಮ ಮೋಹಗಳ ಅಜ್ಞಾನದ ಕತ್ತಲೆಯಾವೃತ,

ಬಾವಿಯ ಮಂಡೂಕನಾಗುವ ಬದಲು;
ಜ್ಞಾನಪುಷ್ಪದ ರಸವನೀರುವ ಚಿಟ್ಟೆಯಾಗು,
ಸ್ವಚ್ಚಂದದಿ ಹಾರುವ ಪಂತಗ ನೀನಾಗು!!!





  
ಬೆಳಕಿಲ್ಲದ ಮನೆಯಲಿ ಕತ್ತಲೆಯೇ ಅಧಿನಾಯಕನು;
ಅಜ್ಞಾನದ ಲೋಕದಲಿ ಬುದ್ದಿಜೀವಿಗಳೇ ಒಡೆಯರು !!!